ನಾರಾಯಣ್ ಆರ್ ಕೆ
1906-. ಅಂತರರಾಷ್ಟ್ರೀಯ ಖ್ಯಾತಿಯ ಭಾರತೀಯ ಕಾದಂಬರಿಕಾರ, ಕಥೆಗಾರ. ತಮಿಳುನಾಡಿನ ಸೇಲಂ ಜಿಲ್ಲೆಯ ರಾಶಿಪುರಂ ಪೂರ್ವಿಕರ ವಾಸಸ್ಥಳ. ತಂದೆ ಕೃಷ್ಣಸ್ವಾಮಿ ಅಯ್ಯರ್ ಮದ್ರಾಸಿನಲ್ಲಿ ನೆಲೆಸಿದ್ದವರು ಮೈಸೂರು ಸಂಸ್ಥಾನದಲ್ಲಿ ಉದ್ಯೋಗ ದೊರಕಿತಾಗಿ ಅಲ್ಲಿಗೆ ವಲಸೆ ಬಂದರು. ನಾರಾಯಣ್ ಮಾತ್ರ ಅಜ್ಜಿಯ ಪೋಷಣೆಯಲ್ಲಿ ಕೆಲ ಕಾಲ ಮದ್ರಾಸಿನಲ್ಲೇ ಉಳಿದರು. ತಂದೆ ಮೊದಲು ಚನ್ನಪಟ್ಟಣದಲ್ಲಿ ಅನಂತರ ಹಾಸನದಲ್ಲಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಮೈಸೂರಿಗೆ ವರ್ಗವಾದಾಗ ಮಗನನ್ನು ತಮ್ಮ ಬಳಿಗೆ ಕರೆಸಿಕೊಂಡರು. ಪ್ರೌಢ ಶಾಲಾ ಪ್ರವೇಶ ಪರೀಕ್ಷೆ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ಹೀಗೆ ನಾರಾಯಣ್ ಅವರ ವಿದ್ಯಾಭ್ಯಾಸ ನಿಧಾನವಾಗಿಯೇ ಸಾಗಿತು. ಓದಿನಲ್ಲಿ ಅಷ್ಟಾಗಿ ಆಸಕ್ತಿ ತೋರದ ಇವರು ಬಿಎ ಮುಗಿಸಿದಾಗ ವಯಸ್ಸು 24. ಆದರೆ ಓದುತ್ತಿರುವಾಗಲೇ ಇವರಿಗೆ ಬರೆಯುವ ಆಸಕ್ತಿ.  ಸಾಮಾನ್ಯ ವ್ಯಕ್ತಿಯಾಗಿ ಉಳಿಯಬೇಕಾದ ಪರಿಸ್ಥಿತಿಯನ್ನು ಸುಧಾರಿಸಿ ಇವರ ವ್ಯಕ್ತಿತ್ವವನ್ನು ಘನತೆಗೇರಿಸಿದ್ದು ಈ ಬರಹದ ಹವ್ಯಾಸ. ಬಿ.ಎ ಮುಗಿದ ಮೇಲೆ ಅವರು ಸ್ವಲ್ಪಕಾಲ ಅಠಾರ ಕಚೇರಿಯಲ್ಲೂ, ಐದು ದಿನ ಮಾತ್ರ ಚನ್ನಪಟ್ಟಣದಲ್ಲಿ ಅಧ್ಯಾಪಕ ವೃತ್ತಿಯಲ್ಲೂ ಇದ್ದು, ಒಗ್ಗದೆ, ಬರಹವನ್ನೆ ವೃತ್ತಿಯನ್ನಾಗಿ ಇಟ್ಟುಕೊಂಡರು. ಪತ್ರಿಕೆಗಳಿಗೆ ಲೇಖನ ಮತ್ತು ಸುದ್ದಿ ಸಂಗ್ರಹಗಳನ್ನು ಬರೆಯತೊಡಗಿ, ಸ್ವಲ್ಪಕಾಲ ದಿ ಇಂಡಿಯನ್ ಥಾಟ್ ಎಂಬ ನಿಯತಕಾಲಿಕವನ್ನೂ ನಡೆಸಿದರು. 

1935 ರಲ್ಲಿ ತಮ್ಮ ಪ್ರಥಮ ಕಾದಂಬರಿ ಸ್ವಾಮಿ ಅಂಡ್ ಫ್ರೆಂಡ್ಸ್ ಇಂಗ್ಲೆಂಡಿನಲ್ಲಿ ಪ್ರಕಟವಾದಾಗಿನಿಂದ ಈವರೆಗೆ ಇವರು ಸುಮಾರು 20 ಕೃತಿಗಳನ್ನು ರಚಿಸಿ ಇಂಗ್ಲಿಷ್ ಭಾಷೆಯಲ್ಲಿ ಬರೆಯುವ ಅಗ್ರಗಣ್ಯ ಭಾರತೀಯ ಲೇಖಕರ ಸಾಲಿನಲ್ಲಿದ್ದಾರೆ. 10 ಕಾದಂಬರಿಗಳನ್ನು, 6 ಕಥಾ ಸಂಕಲಗಳನ್ನೂ ಅಲ್ಲದೇ ಪ್ರವಾಸ ಕಥನ, ಹರಟೆ, ಜೀವನಸ್ಮøತಿ, ಪೌರಾಣಿಕ ಕಥಾ ಸಂಗ್ರಹ ಮತ್ತು ರಾಮಾಯಣದ ಇಂಗ್ಲಿಷ್ ರೂಪಾಂತರವನ್ನು ಕೊಟ್ಟಿದ್ದಾರೆ. ಪಾಶ್ಚಾತ್ಯ ದೇಶಗಳಲ್ಲಿ ಆರಂಭವಾದ ಇವರ ಕೃತಿ ಪ್ರಕಟಣೆ ಮತ್ತು ಪ್ರಶಂಸೆ ದೇಶ-ವಿದೇಶಗಳಲ್ಲಿ ಇವರಿಗೆ ಅನೇಕ ಪ್ರಶಸ್ತಿಗಳನ್ನು ತಂದುಕೊಟ್ಟಿದೆ. 1960 ರಲ್ಲಿ ಇವರ ಕಾದಂಬರಿ ದಿ ಗೈಡ್‍ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. 1964 ರಲ್ಲಿ ಪದ್ಮಭೂಷಣ ಪ್ರಶಸ್ತಿ ಬಂತು. 1967 ರಲ್ಲಿ ಲೀಡ್ ವಿಶ್ವವಿದ್ಯಾನಿಲಯದಿಂದ ಡಿ.ಲಿಟ್ ಪದವಿ ಬಂತು. 1975 ರಲ್ಲಿ ಮೈ ಡೇಸ್ ಎನ್ನುವ ಜೀವನ ಸ್ಮøತಿಗಾಗಿ ಅಮೆರಿಕ ಭಾಷಾ ಸಂಸ್ಥೆಯೊಂದರಿಂದ 2000 ಡಾಲರುಗಳ ನಗದು ಬಹುಮಾನ ಬಂತು. ಇವರ ಅನೇಕ ಕೃತಿಗಳು ಪ್ರಮುಖ ಯುರೋಪ್, ಐರೋಪ್ಯ ಮತ್ತು ಭಾರತೀಯ ಭಾಷೆಗಳಲ್ಲಿ ಅನುವಾದವಾಗಿದೆ. ದಿ ಗೈಡ್ ಇಂಗ್ಲಿಷ್‍ನಲ್ಲೂ, ಹಿಂದಿಯಲ್ಲೂ ಚಲನಚಿತ್ರವಾಗಿರುವುದು ಅಲ್ಲದೆ ಅದರ ನಾಟಕದ ರೂಪವೂ ಬ್ರಾಡ್‍ವೇ ರಂಗಭೂಮಿಯ ಮೇಲೆ ಪ್ರದರ್ಶಿತವಾಗಿದೆ. ಚಲನಚಿತ್ರವಾಗಿ ಬಂದಿರುವ ಇನ್ನೊಂದು ಕೃತಿ ಮಿಸ್ಟರ್ ಸಂಪತ್.

ನಾರಾಯಣ್ ಅವರ ಕೃತಿಗಳ ಅನುಭವ, ಪ್ರೇರಣೆ ಮುಖ್ಯವಾಗಿ ಭಾರತೀಯ ಪರಂಪರೆಗೆ ಸೇರಿದ್ದು. ಇವರ ಒಟ್ಟು ದೃಷ್ಟಿಯಲ್ಲಿಯೇ ಪರಂಪರೆಯ ಮೌಲ್ಯಗಳಿಗೆ ಮನ್ನಣೆಯಿದೆ. ಆದ್ದರಿಂದಲೇ ಇವರು ತಾವು ಆರಿಸಿರುವ ವ್ಯಕ್ತಿಗಳನ್ನು ಸಾಂಪ್ರದಾಯಿಕ ಕಟ್ಟುಪಾಡಿನಲ್ಲಿ ಜೀವನ ಸಂಗ್ರಾಮ ನಡೆಸುತ್ತಿರುವಂತೆ ಚಿತ್ರಿಸುತ್ತಾರೆ. ಒಳ್ಳೆಯ ಬರಹಗಾರ ಧರ್ಮ ಮತ್ತು ಕುಟುಂಬ ಜೀವನದಲ್ಲಿ ಬೇರು ಬಿಟ್ಟಿರಬೇಕು ಎನ್ನುವ ನಾರಾಯಣ್ ಆರಿಸುವುದು ಮಧ್ಯಮ ವರ್ಗದವರ ಜನಜೀವನ ಮತ್ತು ಅವರ ಕೌಟುಂಬಿಕ ಸಂಬಧಗಳನ್ನೇ.  ವಸ್ತು ವಿಸ್ತಾರವಾದಾಗ ಒಟ್ಟು ಪರಂಪರೆಯ ಹಿನ್ನೆಲೆಯನ್ನು ಬಳಸುತ್ತಾರೆ.  ಜೀವನದ ಯಾವ ಏರುಪೇರುಗಳಿದ್ದರೂ ನಡೆದು ಬಂದ ದಾರಿ ಗಟ್ಟಿ ಆಶ್ರಯವನ್ನು ಕೊಡುತ್ತದೆ.

ಇವರ ಮತ್ತೊಂದು ವೈಶಿಷ್ಟ್ಯವೆಂದರೆ ಇವರು ವ್ಯಕ್ತಿ ಸಂಗತಿಗಳನ್ನು ನೋಡುವ ದೃಷ್ಟಿ. ಜೀವನದ ಸಂದರ್ಭಗಳನ್ನು ವಿನೋದದ ದೃಷ್ಟಿಯಿಂದ ನೋಡಿದರೂ ಆಳಗಳನ್ನಿವರು ಕೆದಕುತ್ತಾರೆ. ವೈಚಿತ್ರ ಪೂರ್ಣ ವ್ಯಕ್ತಿಗಳಲ್ಲಿ ಇವರಿಗೆ ಹೆಚ್ಚಿನ ಆಸಕ್ತಿ. ಸಾಮಾನ್ಯವಾಗಿ ಇತರರಿಗೆ ಗೋಚರಿಸದೆ ಹೋಗುವ ಸಾಧಾರಣ ವ್ಯಕ್ತಿ ಸಂಗತಿಗಳು ಇವರ ದೃಷ್ಟಿಗೆ ಬೀಳುತ್ತವೆ. ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಏರಲು ವ್ಯಕ್ತಿಗಳು ಯತ್ನಿಸುವುದನ್ನು ಲವಲವಿಕೆಯಿಂದ ಇವರು ವಿಶ್ಲೇಷಿಸುತ್ತಾರೆ.

ಇವರ ಕಾದಂಬರಿಗಳ ಕಾರ್ಯಕ್ಷೇತ್ರವೆಲ್ಲ ಮಾಲ್ಗುಡಿ ಎಂಬ ಕಾಲ್ಪನಿಕ ಪಟ್ಟಣದಲ್ಲಿ ನಡೆಯುತ್ತದೆ. ಒಂದು ಪರಿಮಿತ ವ್ಯಾಪ್ತಿಯಲ್ಲಿ ವ್ಯಕ್ತಿಗಳ ವಿಚಿತ್ರ ನಡೆಯನ್ನೂ ಸಾಮಾನ್ಯತೆಯಿಂದ ಅಸಾಮಾನ್ಯತೆಗೆ ಏರಿ ಅಲ್ಲಿಂದ ಮೊದಲಿನ ಸ್ಥಿತಿಗೆ ಬರುವ ಜೀವನ ವೈವಿಧ್ಯವನ್ನೂ ಗುರುತಿಸಲು ಮಾಲ್ಗುಡಿ ಸಮಾಜ ಇವರಿಗೆ ತುಂಬಾ ಸಹಕಾರಿಯೆನಿಸಿದೆ. ಅಲ್ಲಿನ ಭೌಗೋಳಿಕ ವಿನ್ಯಾಸ, ತೋಪು, ಬೆಟ್ಟ, ಗುಹೆ, ರಸ್ತೆ, ಏಣಿ ವಿಸ್ತರಣೆ ಶಾಲೆ, ಬ್ಯಾಂಕು, ಸ್ಟುಡಿಯೋ, ರೈಲು ನಿಲ್ದಾಣ, ಸರಯೂ ನದಿ...... ಮಾಲ್ಗುಡಿಯ ವೈವಿಧ್ಯ ಪೂರ್ಣ ನಿಬಿಡ ಜನಪ್ರಪಂಚದಷ್ಟೇ ಬಲುಬೇಗ ಓದುಗರಿಗೆ ಪ್ರಿಯವಾಗುತ್ತವೆ. 

ನಾರಾಯಣ್ ಅವರ ಮೊದಲ ಕಾದಂಬರಿ ಸ್ವಾಮಿ ಅಂಡ್ ಫ್ರೆಂಡ್ಸ್ ಬಾಲಕರ ಪ್ರಪಂಚದ ವಿವಿಧ ನಡೆನುಡಿಗಳನ್ನು ಬಿರುಸು ಬಿನ್ನಾಣಗಳನ್ನೂ ಮನೋಜ್ಞವಾಗಿ ಚಿತ್ರಿಸುತ್ತದೆ.  ಸ್ವಾಮಿ ಮತ್ತು ಅವನ ನಾಲ್ಕಾರು ಸ್ನೇಹಿತನ ನಡುವಿನ ಹಲವಾರು ಪ್ರಸಂಗಗಳು ಸಾಹಸ ಕೃತ್ಯಗಳು ಇಲ್ಲಿನ ವಸ್ತು. ಸ್ನೇಹಿತರ ಸಹವಾಸದಲ್ಲಿ ವಿವಿಧ ಪ್ರಸಂಗಗಳು ಅನುಭವ ಹೊಂದುತ್ತಾ ಸ್ವಾಮಿ, ತನ್ನ ಮೊದಲಿನ ಸಾಮಾನ್ಯ ಸ್ಥಿತಿಯಿಂದ ಶಾಲೆಯ ವಿರುದ್ಧ ಬಂಡಾಯ ಏಳುವಷ್ಟು ಸಾಮಾಜಿಕ ಪ್ರಜ್ಞೆಗೆ ಏರುತ್ತಾನೆ. ಆದರೆ ಕೊನೆಯಲ್ಲಿ ಸ್ನೇಹಿತನನ್ನು ಬೀಳ್ಕೊಡುವ ಸಮಯಕ್ಕೆ ಸ್ನೇಹಿತರ ಪ್ರತಿಕ್ರಿಯೆಯಿಂದಾಗಿ ಮೊದಲಿನ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ನಾವು ನೋಡುತ್ತೇವೆ. ದಿ ಬ್ಯಾಚಲರ್ ಆಫ್ ಆಟ್ರ್ಸ್ (1937) ಯೌವನೋದಯದ ರೋಮ್ಯಾಂಟಿಕ್ ಪ್ರವೃತ್ತಿ ಮತ್ತು ಪರಿಚಿತ ಕುಟುಂಬ ಜೀವನದ ಸೌಖ್ಯದ ವಿರೋಧದ ಚಿತ್ರಗಳನ್ನು ಕೊಡುತ್ತದೆ. ಮೆಚ್ಚಿದ ಕನ್ಯೆಯನ್ನು ಜಾತಕಗಳ ಅಡ್ಡಿಯಿಂದ ವಿವಾಹ ಮಾಡಿಕೊಳ್ಳಲಾಗದ ಯುವಕ ಮನೆಯನ್ನು ಬಿಟ್ಟು ಹೋಗಿ ಸನ್ಯಾಸಿಯಾಗುತ್ತಾನೆ.  ಆದರೆ ಸಂನ್ಯಾಸವೂ ಬೇಸರವಾಗಿ ಹಿಂತಿರುಗಿ ಬಂದು ತಂದೆತಾಯಿ ಗೊತ್ತುಪಡಿಸಿದ ಕನ್ಯೆಯನ್ನು ವಿವಾಹವಾಗುತ್ತಾನೆ.  ಮುಂದಿನ ಕೃತಿ ದಿ ಡಾರ್ಕ್ ರೂಮ್‍ನಲ್ಲಿ (1938) ಸಂಸಾರದ ವಿರಸದಲ್ಲಿ ನೊಂದ ಹೆಣ್ಣು ಪ್ರತಿಭಟಿಸಿ ಮನೆಯಿಂದ ಹೊರಗೆ ಹೋದರೂ ಕೌಟುಂಬಿಕ ಸೆಳೆತಕ್ಕೆ ಸಿಕ್ಕಿ ಗಂಡನ ಬಳಿಗೆ ಹಿಂತಿರುಗುವುದನ್ನು ನೋಡುತ್ತೇವೆ. ದಿ ಇಂಗ್ಲಿಷ್ ಟೀಚರ್‍ನಲ್ಲಿ (1945) ನಾರಾಯಣ್ ಅವರ ಸ್ವಂತ ಅನುಭವದ ಚಿತ್ರಣ ಅದP್ಕÉ ಒಂದು ತೀವ್ರತೆಯನ್ನು ಕೊಡುತ್ತದೆ. ಒಲವಿನ ದಾಂಪತ್ಯ ಜೀವನ ಅರ್ಧದಲ್ಲಿ ಮುರುಟಿ ಹೋಗುವಂತೆ ಹೆಂಡತಿ ಸಾವಿಗೆ ತುತ್ತಾದರೂ ಪತಿಗೆ ಸಾವಿನ ಅನಂತರದ ಜೀವನಾನುಭವದ ಸಂದರ್ಭ ಒದಗಿ, ಮೃತ ಪತ್ನಿಯ ಆತ್ಮದೊಂದಿಗೆ ಸಂಪರ್ಕ ಬೆಳೆಸಿ ಬದುಕಿಗೂ ಸಾವಿಗೂ ಒಟ್ಟಿಗೆ ಕೃತಜ್ಞತೆ ಹೇಳುವವನಾಗುತ್ತಾನೆ. 

ಇಲ್ಲಿಂದ ಮುಂದಿನ ಕೃತಿಗಳಲ್ಲಿ ಮಾಲ್ಗುಡಿಯ ಪ್ರಪಂಚ ಸ್ವಲ್ಪ ವಿಸ್ತಾರವಾಗಿ ವಿಚಿತ್ರ ಪ್ರಕೃತಿಯ ವ್ಯಕ್ತಿಗಳ ಪರಿಚಯ ನಮಗಾಗುತ್ತದೆ. ಇಲ್ಲಿ ಮುಖ್ಯವಾಗಿ ಚುರುಕು ನಡೆಯ, ಸಾಹಸಪ್ರಿಯರೆನಿಸುವ ಆದರೂ ವಿಚಿತ್ರ ಪ್ರವೃತ್ತಿಯಿಂದ ಆಗುಹೋಗದ ವ್ಯವಹಾರಗಳಲ್ಲಿ ತೊಡಗಿ ಕೊನೆಗೆ ಸಾಮಾನ್ಯ ಸ್ಥಿತಿಗೆ ಇಳಿಯುವ ಪಾತ್ರ ಸಮೂಹವನ್ನು ನೋಡುತ್ತೇವೆ. ಮಿಸ್ಟರ್ ಸಂಪತ್‍ನಲ್ಲಿ (1949) ಮುದ್ರಣಕಾರ ಸಂಪತ್ ಚಲನಚಿತ್ರ ತಯಾರಿಸುವ ಹುಚ್ಚಿಗೆ ಬಿದ್ದು ಕೈಸುಟ್ಟುಕೊಳ್ಳುತ್ತಾನೆ.  ಮನಸ್ಸಿನಲ್ಲೇ ಗೋಪುರ ಕಟ್ಟುತ್ತಾ ಕೊನೆಗೆ ಒಂಟಿಯಾಗಿ ರೈಲುನಿಲ್ದಾಣದತ್ತ ಆತ ಸಾಗುತ್ತಿರುವುದನ್ನು ನೋಡುತ್ತೇವೆ. ಹಾಗೆಯೇ ದಿ ಫೈನಾನ್ಷಿಯಲ್ ಎಕ್ಸ್‍ಪರ್ಟ್‍ನ (1952) ಮಾರ್ಗಯ್ಯ ಹಣ ಸಂಚಯದ ವಿಪರೀತಮತಿಯಾಗಿ ದೊಡ್ಡ ದೊಡ್ಡ ಲೇವಾದೇವಿಯಲ್ಲಿ ತೊಡಗಿ ದಿವಾಳಿಯಾಗುತ್ತಾನೆ. ಮಾತು ಕೇಳದ ಮಗನ ಮೇಲಿನ ಪ್ರೇಮ ಅವನ ಜೀವನದಲ್ಲಿ ಸಂಕಟ ತಂದರೂ ಅವನ ಮಾನವೀಯತೆಯನ್ನು ತೋರಿಸುತ್ತದೆ. ಇದಾದ ನಂತರ ವೆಯ್ಟಿಂಗ್ ಫಾರ್ ದಿ ಮಹಾತ್ಮ (1955) ಗಾಂಧೀ ಚಳುವಳಿಯ ಹಿನ್ನೆಲೆಯಲ್ಲಿ ಇಬ್ಬರ ಪ್ರೇಮ ಬೆಳೆದ ರೀತಿಯನ್ನು ಚಿತ್ರಿಸುತ್ತದೆ. ಮುಂದಿನ ದಿ ಗೈಡ್ (1958) ಅನೇಕ ಕಾರಣಗಳಿಂದ ನಾರಾಯಣ್ ಅವರ ಅತ್ಯುತ್ತಮ ಕೃತಿಯಾಗಿದೆ. ವಸ್ತು, ತಂತ್ರನಾವಿನ್ಯ, ಜೀವನ ಸಂದಿಗ್ಧತೆ ಎಲ್ಲವೂ ಈ ಕಾದಂಬರಿಯ ಸಂಕೀರ್ಣತೆಗೆ ಸಹಕಾರಿಯಾಗಿವೆ. ಇಲ್ಲಿ ಎರಡು ನಡೆಯ ಸಂಕೀರ್ಣತೆಯನ್ನು ನೋಡುತ್ತೇವೆ. ತೀರ ಸಾಮಾನ್ಯ ಸ್ಥಿತಿಯಿಂದ ಅಸಾಧಾರಣ ಸ್ಥಿತಿಗೆ ಏರುವ  ನಡೆ ಒಂದು ಕಡೆ; ಅಸಾಧಾರಣ ಸ್ಥಿತಿಯನ್ನು ನಿರಾಕರಿಸುವಲ್ಲಿ ಬರುವ ಮಿಶ್ರಫಲ ಮತ್ತೊಂದು ಕಡೆ. ಮಾಲ್ಗುಡಿಯ ಪ್ರವಾಸಿಗರ ಗೈಡ್ (ಮಾರ್ಗದರ್ಶಿ) ಆದ ರಾಜು ನರ್ತಕಿ ರೋಸಿಯ ಜೀವನದಲ್ಲಿ ಗೈಡ್ ಆಗುವ ಸ್ಥಿತಿಗೇರುತ್ತಾನೆ. ಆದರೆ ಪ್ರಬಲ ಆಕಾಂಕ್ಷೆಗೆ ಈಡಾಗಿ ಮಾಡಿದ ಅಪರಾಧಕ್ಕಾಗಿ ಸೆರೆಮನೆಯ ವಾಸ ಅನುಭವಿಸಬೇಕಾಗುತ್ತದೆ. ಅದು ಮುಗಿದ ಮೇಲೆ ಹೊರಗಡೆ ಹೋದಾಗ ಅಪರಿಚಿತ ಜನ ಅವನನ್ನು ಮಹಾತ್ಮ ಪಟ್ಟಕ್ಕೇರಿಸಿ ಜೀವನದ ಇನ್ನೊಂದು ನಡೆಯ ಗೈಡ್ ಆಗಿ ಮಾಡಿಕೊಳ್ಳುತ್ತದೆ. ಜೀವನದ ವಿರೋಧಾಭಾಸದಲ್ಲಿ ರಾಜುವಿನ ಅನುಭವ ದಿಙ್ಞೂಢಗೊಳಿಸುವಂಥದ್ದು.

ಪುರಾಣ ಕತೆಗಳ ಮೌಲ್ಯಗಳನ್ನು ಗುರುತಿಸುವ ನಾರಾಯಣ್ ಅವರು ಕೊನೆಯ ನಾಲ್ಕು ಕೃತಿಗಳಲ್ಲಿ ಅವನ್ನು ಸಾಂಕೇತಿಕವಾಗಿಯೂ ನೇರವಾಗಿಯೂ ಬಳಸುತ್ತಾರೆ. ದಿ ಮ್ಯಾನ್‍ಈಟರ್ ಆಫ್ ಮಾಲ್ಗುಡಿ (1962) ಎಂಬುದು ಮೋಹಿನಿ-ಭಸ್ಮಾಸುರರ ಕಥೆಯ ಆಧುನಿಕ ರೂಪ. ರಾಕ್ಷಸೀ ಸ್ವಭಾವದ ಒಬ್ಬ ವ್ಯಕ್ತಿ. ತನ್ನ ಪಶುಬಲದಿಂದ ಎಲ್ಲರಲ್ಲೂ ಭೀತಿ ಹುಟ್ಟಿಸಿ, ದುರ್ಮಾರ್ಗ ಪ್ರವರ್ತಕನಾದಾಗ ಅವನ ಬಲವೇ ಅವನಿಗೆ ಮುಳುವಾಗುತ್ತದೆ.  ಕೊನೆಯ ಕಾದಂಬರಿ ದಿ ಸ್ವೀಟ್ ವೆಂಡರ್‍ನಲ್ಲಿ (1967) ಪ್ರಾಪಂಚಿಕತೆಯನ್ನು ಬಿಟ್ಟು ಪಾರಮಾರ್ಥಿಕದತ್ತ ವ್ಯಕ್ತಿ ಸರಿಯುವ ಬಗೆಯನ್ನು ನೋಡುತ್ತೇವೆ. ಈ ಎರಡು ಕಾದಂಬರಿಗಳ ನಡುವೆ ಬಂದ ಗಾಡ್ಸ್ ಡೆಮನ್ಸ್ ಎಂಡ್ ಅದರ್ಸ್ (1965) ಎಂಬ ಕೃತಿಯಲ್ಲಿ ಪುರಾಣ ಕಾವ್ಯಗಳಿಂದ ಆಯ್ದ 14 ಕಥೆಗಳಿವೆ. ಇವರ ರಾಮಾಯಣ (1972) ಕಂಬ ರಾಮಾಯಣವನ್ನು ಅನುಸರಿಸಿ ರಚಿತವಾದುದು. ಈ ಎರಡು ಕೃತಿಗಳಲ್ಲೂ ಲೇಖಕರ ದೃಷ್ಟಿ ಮುಖ್ಯವಾಗಿ ಸಾಹಿತಿಯದು. ಆದ್ದರಿಂದಲೇ ಇಲ್ಲಿ ಸಾಮಾನ್ಯ ಓದುಗರಿಗೂ ವಿದ್ವಾಂಸರಿಗೂ ರುಚಿಸುವಂತೆ ಕಥಾನಿರೂಪಣೆ, ನಾಟಕೀಯ ಸನ್ನಿವೇಶ ರಚನೆ, ಪಾತ್ರಪೋಷಣೆ, ತತ್ವ ಚಿಂತನೆ ಮತ್ತು ದರ್ಶನ ಮುಖ್ಯವಾಗುತ್ತವೆ.

ನಾರಾಯಣ್ ಅವರ ಪ್ರಕಟಿತ ಸಣ್ಣ ಕಥೆಗಳು ಸುಮಾರು 80. ವಿಷಯ, ವೈವಿಧ್ಯ, ನವುರು, ಹಾಸ್ಯ ಮತ್ತು ಆಕರ್ಷಕ ನಿರೂಪಣೆಗಳಿಂದಾಗಿ ಇವರ ಹರಟೆಗಳೂ ಪ್ರವಾಸ ಕಾಲದ ದಿನಚರಿ ಮೈ ಡೇಟ್‍ಲೆಸ್ ಡೈರಿ (1960) ಮತ್ತು ಜೀವನ ಸ್ಮøತಿಗಳನ್ನೊಳಗೊಂಡ ಮೈಡೇಸ್ (1975) ಇವು ಓದುಗರಲ್ಲಿ ಬಹಳ ಕಾಲ ನೆನಪಿನಲ್ಲುಳಿಯುವ ಇತರ ಗದ್ಯ ಕೃತಿಗಳು. 
 											       (ಜಿ.ಎ.ಎನ್.ಆರ್.)
	`ದಿ ಗೈಡ್ ನಾರಾಯಣ್ ಅವರ ಶ್ರೇಷ್ಠ ಕಾದಂಬರಿ. ಅವರ ಹಿಂದಿನ ಕಾದಂಬರಿಗಳಲ್ಲಿ ಕಾಣುವ ಸೌಮ್ಯ, ಐರನಿ ಇಲ್ಲಿ ಆಳವಾಗುತ್ತದೆ, ಬಹುಮುಖಿಯಾಗುತ್ತದೆ. ಮನುಷ್ಯನ ಮಿತವಾದ ಜ್ಞಾನ ಮತ್ತು ವಾಸ್ತವಗಳ ನಡುವಣ ಅಂತರ ಇವುಗಳನ್ನು ಅನಾವರಣ ಮಾಡುತ್ತಿದ್ದ ಅವರ ಐರನಿಯ ವ್ಯಾಪ್ತಿ ಇನ್ನೂ ವಿಸ್ತಾರವಾಗುತ್ತಿದ್ದೇ ಹೊರ ಸ್ವರೂಪ-ವಾಸ್ತವ, ಮನುಷ್ಯನ ಉದ್ದೇಶಗಳು, ಅವನು ಆರಿಸಿಕೊಳ್ಳುವ ಮಾರ್ಗಗಳು, ಮನುಷ್ಯ ಪ್ರಯತ್ನ ಮತ್ತು ಸಾಧನೆ ಬದುಕಿನ ಇಂಥ ಮುಖಗಳನ್ನು ಒಳಗೊಳ್ಳುತ್ತದೆ. ಸರ್ವಸಾಕ್ಷಿ ನಿರೂಪಣೆ, ಆತ್ಮವೃತ್ತ ನಿರೂಪಣೆ ಎರಡನ್ನೂ ಬಹು ಜಾಣ್ಮೆಯಿಂದ ಇಲ್ಲಿ ಬಳಸಿಕೊಂಡಿದೆ ನಾಯಕನ ಕಡೆಯ ಮಾತುಗಳಲ್ಲಿಯೂ ಸಂದಿಗ್ಧವಿದೆ.

	1976ರಲ್ಲಿ ಪ್ರಕಟವಾದ `ದಿ ಪೈಂಟರ್ ಆಫ್ ಸೈನ್ಸ್ ರಾಮನ್ ಎಂಬ ವರುಣ ಮತ್ತು ಡೆಯ್ಸಿ ಎಂಬ ವರುಣಿಯರ ಸಂಬಂಧದ ಕಥೆ. ಅಷ್ಟೇನೂ ವಿಶಿಷ್ಟ ರಚನೆಯಲ್ಲ.

	ನಾರಾಯಣ್ ಅನೇಕ ಸಣ್ಣ ಕಥೆಗಳನ್ನು ಬರೆದಿದ್ದಾರೆ. `ಸೈತೋನ್ ಅಂಡ್ ಅದರ್ ಸ್ಟೋರಿಸ್ (1943), `ದಾದು ಅಂಡ್ ಅದರ್ ಸ್ಟೋರಿಸ್ (1943), `ಮಾಲ್‍ಗುಡಿ ಡೇಸ್ (1943), `ಎನ್ ಅಸ್ಟ್ರಾಲಜರ್ಸ್ ಡೇ ಅಂಡ್ ಅದರ್ ಸ್ಟೋರಿಸ್ (1947), `ಲಾಲಿ ರೋಡ್ ಅಂಡ್ ಅದರ್ ಸ್ಟೋರಿಸ್ (1956), `ಎ ಹಾರ್ಸ್ ಅಂಡ್ ಟು ಗೊಟ್ಸ್ (1970), ಅವರ ಇವರ ಕಥಾ ಸಂಗ್ರಹಗಳು. ಅವರ ಯಶಸ್ವೀ ಕಥೆಗಳ ಮಾದರಿಯಾಗಿ `ಎ ಹಾರ್ಸ್ ಅಂಡ್ ಟು ಗೋಟ್ಸ್ ಅನ್ನು ಹೆಸರಿಸಬಹುದು, ಹಳ್ಳಿಯೊಂದಕ್ಕೆ ಬಂದ ಅಮೆರಿಕನನೊಬ್ಬ ಹಳ್ಳಿಯಲ್ಲಿ ತಾನು ಕಂಡ ದೊಡ್ಡ ಮಣ್ಣಿನ ಕುದುರೆಯನ್ನು ಕೊಳ್ಳಲು ಬಯಸುತ್ತನೆ, ಅವನ ಭಾಷೆ ತಿಳಿಯದ ಹಳ್ಳಿಯವನೊಬ್ಬ ಅವನು ತನ್ನ ಎರಡು ಮೇಕೆಗಳನ್ನು ಕೊಳ್ಳಲು ಬಯಸುತ್ತಾನೆ ಎಂದು ಅರ್ಥಮಾಡಿಕೊಳ್ಳುತ್ತಾನೆ. ಈ ಸನ್ನಿವೇಶದ ವಿನೋದವನ್ನು ಕಥೆಯು ಅರಳಿಸುತ್ತ ಹೋಗುತ್ತದೆ.

	ನಾರಾಯಣ್ ಅವರ ಕಾದಂಬರಿಗಳು ಮತ್ತು ಕಥೆಗಳಲ್ಲಿ ಎದ್ದು ಕಾಣುವುದು ನಿತ್ಯ ಜೀವನವನ್ನು ಐರನಿ ಮತ್ತು ಖುಷಿಯಾದ ಸಹನೆಗಳ ಮೂಲಕ ಕಾಣುವ ವಿಶೇಷ ಶಕ್ತಿ, ಸಾಮಾನ್ಯ ಜನರ ವೈಚಿತ್ರ್ಯಗಳನ್ನು ಸಂತೋಷದಿಂದ ಗುರುತಿಸುವ ಶಕ್ತಿ, ನೂರು ವಿವರಗಳ ಮೂಲಕ ಒಂದು ಸ್ಥಳವನ್ನು ಸನ್ನಿವೇಶವನ್ನು ಪುನರ್ ಸೃಷ್ಟಿ ಮಾಡುವ ಶಕ್ತಿ. ಭಾರತೀಯರ ನಿತ್ಯ ಜೀವನವನ್ನು ಕುತೂಹಲಕರವಾಗಿ, ಲವಲವಿಕೆಯಿಂದ ನಿರೂಪಿಸುವ ಇವರ ಪ್ರತಿಭೆ ಇಂಗ್ಲಿಷಿನಲ್ಲಿ ಸಾಹಿತ್ಯ ರಚನೆ ಮಾಡುವ ಭಾರತೀಯ ಬರಹಗಾರರಲ್ಲಿ ವಿಶಿಷ್ಟವಾದದ್ದು. `ದಿ ಫೈನಾನ್‍ಷಿಯಲ್ ಎಕ್ಸ್‍ಪರ್ಟ್, `ದಿ ಗೈಡ್ ಮುಂತಾದ ಕಾದಂಬರಿಗಳು ಇವರ `ಐರಾನಿಕಲ್ ನಿರೂಪಣೆಯು ಗಂಭೀರ ಚಿಂತನೆಯನ್ನು ಒಳಗೊಳ್ಳಬಲ್ಲದು. ಎನ್ನುವುದನ್ನು ತೋರಿಸುತ್ತವೆ.
									(ಪರಿಷ್ಕರಣೆ: ಎಲ್.ಎಸ್.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ